By ETF Desk
ಪ್ರಕರಣದ ಹಿನ್ನೆಲೆ
ಮೂಡುತೋನ್ಸೆ ಗ್ರಾಮದ ನೇಜಾರು ಸಂತೇಕಟ್ಟೆಯ ರಾಜೀವನಗರದ ನಿವಾಸಿಗಳಾದ ಎಸ್. ಪ್ರಕಾಶ್ (50) ಮತ್ತು ಪೂರ್ಣಿಮಾ ದಂಪತಿಗೆ ಮದುವೆಯಾಗಿ 11 ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಅವರು ಉಡುಪಿಯ ಬನ್ನಂಜೆಯ ಪ್ರಸಿದ್ಧ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪೂರ್ಣಿಮಾ ಅವರ ಅಕ್ಕ ಲಕ್ಷ್ಮೀ ಅವರಿಗೆ ಪರಿಚಿತರೊಬ್ಬರ ಮೂಲಕ ಸದರಿ ಆಸ್ಪತ್ರೆಯಲ್ಲಿ ಮಗುವೊಂದು ಲಭ್ಯವಿರುವ ಮಾಹಿತಿ ಸಿಕ್ಕಿತ್ತು. ಇದರ ಬೆನ್ನಲ್ಲೇ ದಂಪತಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದರು.
ಬಯಲಿಗೆ ಬಂದಿದ್ದು ಹೇಗೆ?
ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ (CDPO) ಮೇಲ್ವಿಚಾರಕರು ಜೂನ್ 19 ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ (DCPU) ಮಾಹಿತಿ ನೀಡಿದ್ದರು. ಪ್ರಕಾಶ್ ದಂಪತಿ ಯಾವುದೇ ಕಾನೂನಾತ್ಮಕ ಪ್ರಕ್ರಿಯೆ ನಡೆಸದೆ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ತಂದು ಸಾಕುತಿತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
ಮಾಹಿತಿ ಆಧಾರದ ಮೇಲೆ ಅಧಿಕಾರಿಗಳ ತಂಡ ದಂಪತಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ, ಮಗುವಿನ ಮೂಲದ ಬಗ್ಗೆ ದಂಪತಿ ಪರಸ್ಪರ ಗೊಂದಲದ ಹಾಗೂ ಶಂಕಾಸ್ಪದ ಹೇಳಿಕೆಗಳನ್ನು ನೀಡಿದ್ದಾರೆ. ತನಿಖೆ ಮುಂದುವರಿದಾಗ ಇದು ಕಾನೂನುಬಾಹಿರವಾಗಿ ನಡೆದ ಮಗು ಹಸ್ತಾಂತರ ಪ್ರಕ್ರಿಯೆ ಎಂಬುದು ದೃಢಪಟ್ಟಿದೆ.
ಅಕ್ರಮ ಜಾಲ ಮತ್ತು ನಕಲಿ ದಾಖಲೆಗಳು
ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಕೆ. ಸುರೇಂದ್ರ ಕಾಮತ್ (76) ಅವರು ಕಾನೂನುಬಾಹಿರವಾಗಿ ಮಗುವನ್ನು ದಂಪತಿಗೆ ಹಸ್ತಾಂತರಿಸಿದ್ದಲ್ಲದೆ, ಆಸ್ಪತ್ರೆಯ ವತಿಯಿಂದಲೇ ನಕಲಿ ಜನನ ದಾಖಲೆಗಳನ್ನು ಸೃಷ್ಟಿಸಿಕೊಟ್ಟಿದ್ದರು. ಈ ನಕಲಿ ದಾಖಲೆಗಳನ್ನು ಬಳಸಿಕೊಂಡು ದಂಪತಿ ಉಡುಪಿ ನಗರಸಭೆಯಿಂದ ಮಗುವಿನ ಅಧಿಕೃತ ಜನನ ಪ್ರಮಾಣಪತ್ರವನ್ನೂ ಪಡೆದುಕೊಂಡಿದ್ದರು. ಆರೋಪಿಗಳು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಒಳಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಮತ್ತು ಕಾನೂನು ಕ್ರಮ
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ವೈದ್ಯ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ:
ಡಾ. ಕೆ. ಸುರೇಂದ್ರ ಕಾಮತ್ (76) - ಕಾಮತ್ ನರ್ಸಿಂಗ್ ಹೋಮ್ ವೈದ್ಯ
ಎಸ್. ಪ್ರಕಾಶ್ (50) - ಮಗುವನ್ನು ಪಡೆದ ವ್ಯಕ್ತಿ
ಸಂಪತ್ ಎಸ್. (ಕಾರ್ಕಳ) - ಮಗುವನ್ನು ನೀಡಿದ ಪಾಲಕರು ಹಾಗೂ ಮತ್ತೊಬ್ಬ ಮಹಿಳೆ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 143(4), 61, 318(2) ಹಾಗೂ ಬಾಲ ನ್ಯಾಯ ಕಾಯ್ದೆ (Juvenile Justice Act) ಸೆಕ್ಷನ್ 81 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮಗುವಿನ ಜೈವಿಕ ಪಾಲಕರು ಯಾರೆಂಬುದನ್ನು ಪತ್ತೆಹಚ್ಚಲಾಗಿದ್ದು, ಪ್ರಕರಣದ ಕುರಿತು ಮತ್ತಷ್ಟು ತನಿಖೆ ಮುಂದುವರಿದಿದೆ.